ತಂತೀಕರಣ 
ವಿದ್ಯುತ್ಸಾಮಥ್ರ್ಯವನ್ನು ಆಕರದಿಂದ ಉಪಯೋಗ ಬಿಂದುವಿಗೆ ಒಯ್ಯುಲು ಬಳಸುವ ವಿದ್ಯುದ್ವಾಹಕ, ಘಟಕ ಹಾಗೂ ಉಪಕರಣಗಳ ವ್ಯವಸ್ಥೆಯನ್ನು ಅಳವಡಿಸುವುದು (ವೈರಿಂಗ್).  ಇಂಥ ತಂತೀಕರಣ ವಿದ್ಯುತ್ತನ್ನು ಅಪಾಯರಹಿತವಾಗಿ, ಅಡಚಣೆಯಿಲ್ಲದೆ ಮತ್ತು ಅಧಿಕ ಪರಿಣಾಮದ ವಿದ್ಯುತ್ತಿನ ನಷ್ಟ ಸಂಭವಿಸದಂತೆ ಬಳಕೆಯ ಸ್ಥಾನಕ್ಕೆ ಒಯ್ಯಬೇಕು.  ವಿದ್ಯುತ್ ಪೂರೈಕೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳಿವೆ : 1 ಪ್ರಾಥಮಿಕ (ಪ್ರೈಮರಿ) ಪೂರೈಕೆ.  2 ದ್ವಿತೀಯಕ (ಸೆಕೆಂಡರಿ) ಪೂರೈಕೆ.

    ಬೃಹತ್ ಪರಿಣಾಮದ ಕೈಗಾರಿಕೆ, ಪ್ರಯೋಗಾಲಯ ಮೊದಲಾದವುಗಳಿಗೆ ಅಧಿಕ ವೋಲ್ಟೇಜಿನ ವಿದ್ಯುತ್ತನ್ನು ಪೂರೈಕೆ ಮಾಡುವುದು ಪ್ರಾಥಮಿಕ ಪೂರೈಕೆ. ಬಹಳ ವಿಶಾಲವಾಗಿ ಹರಡಿಕೊಂಡಿರುವ ಕೈಗಾರಿಕೆಯ ವಿವಿಧ ಭಾಗಗಳಿಗೆ ಕಡಿಮೆ ನಷ್ಟದೊಡನೆ ವಿದ್ಯುತ್ತನ್ನು ವಿತರಣೆ ಮಾಡುವುದು ಅಧಿಕ ವೋಲ್ಟೇಜಿನಿಂದ ಮಾತ್ರ ಸಾಧ್ಯ.  ಈ ವಿಧಾನದಲ್ಲಿ ವಿದ್ಯುತ್ತನ್ನು ಮುಖ್ಯ ಸ್ವಿಚ್ ಫಲಕದಿಂದ ಅಧಿಕ ವೋಲ್ಟೇಜಿನಲ್ಲಿ ವಿವಿಧ ವಿತರಣೆ ಕೇಂದ್ರಗಳಿಗೆ ಒಯ್ಯಲಾಗುತ್ತದೆ.

    ಅಲ್ಲಿ ಇದನ್ನು ಪರಿವರ್ತಕಗಳ (ಟ್ರಾನ್ಸ್‍ಫಾರ್ಮರ್ಸ್) ಸಹಾಯದಿಂದ ಬಳಕೆಗೆ ಯೋಗ್ಯವಾದ ವೋಲ್ಟೇಜಿಗೆ ಇಳಿಸಿ ಅಗತ್ಯವೆನಿಸಿದ ಎಡೆಗಳಿಗೆ ಸರಬರಾಜು ಮಾಡಲಾಗುವುದು.

    ಸಣ್ಣ ತರದ ಕೈಗಾರಿಕೆಗಳಿಗೆ ಮತ್ತು ಗೃಹ ಬಳಕೆಗೆ ವಿದ್ಯುತ್ತನ್ನು ಒದಗಿಸುವುದಕ್ಕೆ ದ್ವಿತಿಯಕ ಪೂರೈಕೆ ಎಂದು ಹೆಸರು.  ಈ ವಿಧಾನದಲ್ಲಿ ವಿದ್ಯುತ್ತನ್ನು ಬಳಕೆಗೆ ಅವಶ್ಯವೆನಿಸಿದ ವೋಲ್ಟೇಜಿನಲ್ಲೇ ಸರಬರಾಜು ಮಾಡಲಾಗುವುದು.  ಹೀಗೆ ಪೂರೈಕೆ ಮಾಡುವ ವಿದ್ಯುತ್ತು ಒಂದು ಅಥವಾ ಮೂರು ಪ್ರಾವಸ್ಥೆಯದು (ಫೇಸ್) ಆಗಿರಬಹುದು.

    ಸ್ವಿಚ್ ಫಲಕ :  ಪೂರೈಕೆಯ ತಂತಿಗಳಿಂದ ವಿದ್ಯುತ್ತು ಮುಖ್ಯ ಸ್ವಿಚ್ ಫಲಕಕ್ಕೆ ಬರುತ್ತದೆ.  ಇದರಲ್ಲಿ ಹಲವಾರು ಸ್ವಿಚ್‍ಗಳು, ಫ್ಯೂಸುಗಳು ಮುಂತಾದ ಮಂಡಲ ವಿಚ್ಚೇದಕಗಳು ಇರುವುವು.  ಇವುಗಳ ಸಹಾಯದಿಂದ ವಿದ್ಯುತ್ ಸಂಪರ್ಕವನ್ನು ಕಡಿದುಹಾಕಬಹುದು ಮತ್ತು ಅತಿ ಪ್ರವಾಹದ ಎದುರು ರಕ್ಷಣೆಯನ್ನು ಪಡೆಯಬಹುದು. ಮುಖ್ಯ ಸ್ವಿಚ್ ಫಲಕವನ್ನು ವಿತರಣ ಫಲಕಕ್ಕೆ ಜೋಡಿಸಿದೆ.  ಇಲ್ಲಿಂದ ವಿವಿಧ ಬಗೆಯ ಹೊರೆಗಳಿಗೆ (ಲೋಡ್ಸ್) ವಿದ್ಯುತ್ತಿನ ಪೂರೈಕೆ ಆಗುವುದು.

ಚಿತ್ರ-1

    ಹೊರೆಗಳು ವಿದ್ಯುದ್ದೀಪ ಮತ್ತು ಮೊಟರುಗಳನ್ನು ಒಳಗೊಂಡಿರಬಹುದು.  ಇಂಥ ಸಂದರ್ಭಗಳಲ್ಲಿ ಪ್ರಕಾಶನ ಫಲಕ ಮತ್ತು ಮೋಟರ್ ಫಲಕಗಳನ್ನು ವಿತರಣ ಫಲಕಕ್ಕೆ ಜೋಡಿಸಲಾಗಿರುತ್ತದೆ.  ಪ್ರಕಾಶನನ ಫಲಕದಿಂದ ಎಲ್ಲ ವಿದ್ಯುದ್ದೀಪಗಳಿಗೂ ಮೋಟರ್ ಫಲಕದಿಂದ ಎಲ್ಲ ಮೋಟರುಗಳಿಗೂ ತಂತೀಕರಣವಾಗಿರುತ್ತದೆ.  ಪ್ರಕಾಶನ ಫಲಕದಲ್ಲಿರುವ ಸ್ವಿಚ್ ಮತ್ತು ಫ್ಯೂಸ್‍ಗಳ ಸಹಾಯದಿಂದ ವಿದ್ಯುದ್ದೀಪಗಳಿಗೆ ವಿದ್ಯುತ್ ಪೂರೈಕೆಯನ್ನು ಮಾಡಬಹುದು ಅಥವಾ ನಿಲ್ಲಿಸಬಹುದು ಮತ್ತು ಅತಿ ಪ್ರವಾಹದ ಎದುರು ರಕ್ಷಣೆಯನ್ನು ಒದಗಿಸಬಹುದು.  ಮೋಟರ್ ಫಲಕ ಮೋಟರ್ ಮಂಡಲಗಳಿಗೆ ಇದೇ ರೀತಿ ಉಪಯುಕ್ತವಾಗಿದೆ.

    ತಂತೀಕರಣದ ವಿಧಾನಗಳು : ಹತ್ತೊಂಬತ್ತನೆಯ ಶತಮಾನದ ಅಂತ್ಯಭಾಗದಿಂದ ವಿದ್ಯುತ್ ಬಳಕೆ ಪ್ರಾರಂಭವಾಯಿತು.  ಅಲ್ಲಿಂದೀಚೆಗೆ ತಂತೀಕರಣದ ಹಲವು ವಿಧಾನಗಳು ಬಳಕೆಗೆ ಬಂದಿವೆ.  ಅವನ್ನು ಮುಖ್ಯವಾಗಿ ಹೀಗೆ ವರ್ಗೀಕರಿಸಬಹುದು.
1  ದೃಢ ಲೋಹನಾಳಗಳ (ರಿಜಿಡ್ ಕಂಡ್ಯೂಟ್ಸ್)ಮೂಲಕ ತಂತೀಕರಣ
2  ನಮ್ಯ (ಫ್ಲೆಕ್ಸಿಬಲ್) ಲೋಹನಾಳಗಳ ಮೂಲಕ ತಂತೀಕರಣ
3  ಅಲೋಹ ಕೋಶಗಳ ಮೂಲಕ ತಂತೀಕರಣ
4  ಅಲೋಹ ವೇಷ್ಟನಗಳ (ಷೀತ್ಸ್) ಮೂಲಕ ತಂತೀಕರಣ
5  ಲೋಹ ವೇಷ್ಟನಗಳ ಮೂಲಕ ತಂತೀಕರಣ
6  ವಿವೃತ (ತೆರೆದ) ಅಥವಾ ಕ್ಲೀಟ್ ತಂತೀಕರಣ
7  ಸಂವೃತ (ಗುಪ್ತ) ತಂತೀಕರಣ

    1 ದೃಢ ಲೋಹನಾಳಗಳ ಮೂಲಕ ತಂತೀಕರಣ : ಇದರಲ್ಲಿ ವಿದ್ಯುತ್ ತಂತಿಗಳನ್ನು ಸಂಪೂರ್ಣವಾಗಿ ಉಕ್ಕಿನ ನಾಳಗಳೊಳಗೆ ಮುಚ್ಚಲಾಗಿರುವುದು.  ನಾಳಗಳನ್ನು ತಿರುಚು ಮೊಳೆಗಳ ಸಹಾಯದಿಂದ ಒಂದಕ್ಕೊಂದು ಜೋಡಿಸುವರು.  ಸಂಧೀಕರಡಿ (ಜಂಕ್ಷನ್ ಬಕ್ಸ್) ಮತ್ತು ಪರೀಕ್ಷಣ ಜೋಡಣೆಗಳ ನೆರವಿನಿಂದ ತಂತಿಗಳನ್ನು ಬೇಕಾದ ಜಾಗದಲ್ಲಿ ಹೊರತರುವುದು ಮತ್ತು ತಂತೀಕರಣವನ್ನು ಬೇಕಾದ ದಿಕ್ಕಿನತ್ತ ತಿರುಗಿಸಿಕೊಳ್ಳುವುದು ಸಾಧ್ಯ.  ಈ ರೀತಿಯ ಜೋಡಣೆ ಸಾಧನಗಳ ಸಹಾಯದಿಂದ ನಾಳಗಳನ್ನು ಸಂಪೂರ್ಣವಾಗಿ ಗೋಡೆಗಳಲ್ಲಿ ಇರಿಸಿದ ಬಳಿಕವೂ ಅವುಗಳ ಮೂಲಕ ತಂತಿಗಳನ್ನು ಎಲೆಯಬಹುದು.  ಉಕ್ಕಿನ ನಾಳಗಳನ್ನು ತಿರುಪು ಮೊಳೆಗಳ ಸಹಾಯದಿಂದ ಒಂದಕ್ಕೊಂದು ಸೇರಿಸಲಾಗುವುದು.

     ಹೀಗಾಗಿ ನಿರಂತರ ಭೂಸಂಪರ್ಕ ಕೂಡ ಲಭಿಸುತ್ತದೆ.  ವಲ್ಕನೈಸ್ಡ್ ಇಂಡಿಯ ರಬ್ಬರ್ ಅಥವಾ ಪ್ಲಾಸ್ಟಿಕ್ಕಿನ ರೋಧನ (ಇನ್ಸುಲೇಷನ್) ಹೊರ ಕವಚವುಳ್ಳ ತಂತಿಗಳನ್ನು ನಾಳಗಳೊಳಗೆ ತಂತೀಕರಣಕ್ಕಾಗಿ ಬಳಸುವರು.

    2  ನಮ್ಯ ಲೋಹನಾಳಗಳ ಮೂಲಕ ತಂತೀಕರಣ :  ಇಂಥ ಒಂದು ನಾಳವನ್ನು ಪೀನ (ಕಾನ್ವೆಕ್ಸ್) ಹಾಗೂ ನಿಮ್ನ (ಕಾನ್ಕೇವ್) ರೂಪದ ಲೋಹದ ಪಟ್ಟಿಗಳ ಜೋಡಣೆಯಿಂದ ತಯಾರಿಸುತ್ತಾರೆ.  ಸರ್ಪಿಲವಾಗಿ ಸುತ್ತುವ ಲೋಹ ಪಟ್ಟಿಗಳ ನಿಮ್ನ ತಲಗಳು ಒಂದನ್ನೊಂದು ಹಿಡಿತದಲ್ಲಿಡುತ್ತವೆ.  ಈ ನಾಳ ಸಲೀಸಾಗಿ ಬಳಕುವುದರಿಂದ ಇದರ ಬಳಕೆ ಬಲು ಸುಲಭ.  ತೇವ ಇದರೊಳಗೆ ಸುಲಭವಾಗಿ ಪ್ರವೇಶಿಸಬಲ್ಲದು.  ಅದ್ದರಿಂದ ತೇವಭರಿತ ಸ್ಥಳಗಳಲ್ಲಿ ಇದರ ಉಪಯೋಗ ಅಪೇಕ್ಷಣೀಯವಲ್ಲ.  ನಮ್ಯ ಲೋಹನಾಳವನ್ನು ಸಂಪೂರ್ಣ ತಂತೀಕರಣಕ್ಕೆ ಬಳಸುವ ಬದಲು ಹಿತಮಿತವಾಗಿ ಅನಮ್ಯ ಲೋಹನಾಳದೊಡನೆ ಬಳಸುವುದು ಅಪೇಕ್ಷಣೀಯ.

    3 ಅಲೋಹ ಕೋಶಗಳ ಮೂಲಕ ತಂತೀಕರಣ :  ಇದರಲ್ಲಿ ವಿದ್ಯುತ್ ತಂತಿಗಳ ಸುತ್ತಲೂ ವಿದ್ಯುತ್‍ರೋಧಕ, ಅಗ್ನಿರೋಧಕ ಮತ್ತು ತೇವರೋಧಕ ವಸ್ತುಗಳ ಕವಚವನ್ನು ತೊಡಿಸಲಾಗುವುದು.  ಸಂಪೂರ್ಣವಾಗಿ ತೇವರಹಿತವಾದ ಸ್ಥಳಗಳಿಗೆ ಮಾತ್ರ ಇದು ಯೋಗ್ಯ.

    4  ಅಲೋಹ ವೇಷ್ಟನಗಳ ಮೂಲಕ ತಂತೀಕರಣ :  ಇಂದು ಪಿ.ವಿ.ಸಿ. (ಪಾಲಿವೆಸಿಲ್ ಕ್ಲೋರೈಡ್) ಎಂಬ ನಾಳಗಳು ಲೋಹ ನಾಳಗಳಿಗಿಂತ ಹೆಚ್ಚು ಹೆಚ್ಚಾಗಿ ಬಳಕೆಯಲ್ಲಿವೆ.

    5  ಲೋಹ ವೇಷ್ಟನಗಳ ಮೂಲಕ ತಂತೀಕರಣ :  ಈ ವಿಧಾನದಲ್ಲಿ ಲೋಹದ ಪಟ್ಟಿಯನ್ನು ವಿದ್ಯುತ್ ತಂತಿಯ ಸುತ್ತ ಸುತ್ತುವರು.  ಇದು ಸುಲಭ ನಮ್ಯಶೀಲವಾಗಿರುವುದರಿಂದ ಬಲು ತಿರುಚುಗಳುಳ್ಳ ತಂತೀಕರಣಕ್ಕೆ ಯೋಗ್ಯವೆನಿಸುತ್ತದೆ.  
 
   6  ವಿವೃತ (ಕೀಟ್) ತಂತೀಕರಣ :  ವಲ್ಕನೀಕೃತ ರಬ್ಬರಿನ ವಿದ್ಯುತ್ ರೋಧಕ ಕವಚವುಳ್ಳ ತಂತಿಗಳನ್ನು ನಾಳರಹಿತವಾಗಿಯೂ ಬಳಸಬಹುದು.

ಚಿತ್ರ-2

ಈ ವಿಧಾನದಲ್ಲಿ ತಂತಿಗಳನ್ನು ಪಿಂಗಾಣಿಯ ಕ್ಲೀಟ್‍ಗಳ ನಡುವೆ ಗೋಡೆಯ ಮೈಗೆ ತಾಗದಂತೆ  ಬಿಗಿಯಾಗಿ ಎಳೆಯಲಾಗುವುದು. ಅಡ್ಡಗೋಡೆಯ ಮೂಲಕ ತಂತೀಕರಣ ಹಾದುಹೋಗುವಾಗಲೂ ಸ್ವಿಚ್ಚುಗಳ ಬಳಿಯಲ್ಲೂ ತಂತಿಗಳನ್ನೂ ನಾಳಗಳಿಂದ ಆವರಿಸಲಾಗುವುದು.  ಸೀಸದ ಅಥವಾ ಗಟ್ಟಿ ರಬ್ಬರಿನ ಕವಚವುಳ್ಳ ತಂತಿಗಳನ್ನು ಬಕ್ಲ್ ಕ್ಲಿಪ್‍ಗಳ ಸಹಾಯದಿಂದ ಗೋಡೆಯ ಮೈಗೆ ತಾಗಿಕೊಂಡೇ ಎಳೆಯಬಹುದು.

    7  ಸಂವೃತ ತಂತೀಕರಣ :  ಈ ವಿಧಾನದಲ್ಲಿ ತಂತಿಗಳನ್ನು ಒಲಗೊಂಡ ಲೋಹನಾಳ ಅಥವಾ ಲೋಹವೇಷ್ಟನ ಗೋಡೆಯ ಗಿಲಾವಿನೊಳಗೆ ಅಡಗಿ ಹೋಗುವುದು.  ಹೀಗಾಗಿ ತಂತೀಕರಣ ಮೇಲೆ ಕಾಣಿಸಿಕೊಳ್ಳುವುದಿಲ್ಲ.

    ತಂತೀಕರಣದ ಒಂದೊಂದು ವಿಧಾನವೂ ಒಂದೊಂದು ರೀತಿಯಲ್ಲಿ ಅನುಕೂಲವೆನಿಸುತ್ತದೆ.  ಕಟ್ಟಡದ ರಚನೆ, ಸ್ಥಳದ ಹವೆ, ಬದಲಾವಣೆಯ ಸಾಧ್ಯತೆಗಳು, ವೆಚ್ಚ-ಇವನ್ನೆಲ್ಲ ದೃಷ್ಟಿಯಲ್ಲಿಟ್ಟುಕೊಂಡು ಅವುಗಳಿಗೆ ಸರಿಹೊಂದುವಂಥ ತಂತೀಕರಣ ವಿಧಾನವನ್ನು ಅರಿಯಬೇಕಾಗುತ್ತದೆ.  ಹಲವಾರು ಸೌಲಭ್ಯಗಳ ಕಾರಣದಿಂದಾಗಿ ಇಂದು ಪಿ.ವಿ.ಸಿ. ನಾಳಗಳನ್ನು ಲೋಹನಾಳಗಳಿಗಿಂತ ಹೆಚ್ಚಾಗಿ ಬಳಸುವುದು ರೂಢಿ ಅಗಿದೆ.  ವೆಚ್ಚದ ದೃಷ್ಟಿಯಿಂದ ನೋಡಿದರೆ ಪಿ.ವಿ.ಸಿ. ನಾಳಗಳು ಲೋಹ ನಾಳಗಳಿಗಿಂತ ಹೆಚ್ಚು ದುಬಾರಿಯವು.  ಪಿ.ವಿ.ಸಿ. ನಾಳಗಳೊಳಗೆ ಬೇರೆಯೇ ಅದ ಒಂದು ಭೂತಂತಿಯನ್ನು ಎಳೆಯಬೇಕಾಗುತ್ತದೆ.  ವೆಚ್ಚದ ದೃಷ್ಟಿಯಿಂದ ಇದು ದುಬಾರಿ ಎನಿಸಿದರೂ ಉತ್ತಮವಾದ ಭೂಸಂಪರ್ಕವನ್ನು ಕೊಡುವ ದೃಷ್ಟಿಯಿಂದ ಬಲು ಅಪೇಕ್ಷಣೀಯವೆನಿಸುತ್ತದೆ.  ಅಸಮರ್ಪಕವಾದ ಜೋಡಣೆಗಳ ಕಾರಣದಿಂದಾಗಿ ಲೋಹನಾಳಗಳಲ್ಲಿ ಉತ್ತಮವಾದ ಭೂಸಂಪರ್ಕ ಇರುವ ಸಂಭಾವ್ಯತೆ ಕಡಿಮೆ.  ಪಿ.ವಿ.ಸಿ. ನಾಳಗಳು ರಾಸಾಯನಿಕ ಕ್ರಿಯೆಗೆ ಒಳಗಾಗುವುದಿಲ್ಲ.  ಬೇಕೆನಿಸಿದಂತೆ ಅವನ್ನು ಬಗ್ಗಿಸಿ ಬೇಕಾದ ಸ್ಥಳದಲ್ಲಿ ತೂರಿಸಬಹುದು. ಈಗಿನ ಸಂವೃತ ತಂತೀಕರಣ ವಿಧಾನ ವಿವೃತ ತಂತೀಕರಣ ವಿಧಾನಕ್ಕಿಂತ ಜನಪ್ರಿಯವಾಗುತ್ತಿದೆ. ಗೋಡೆಗಳ ಅಂದ ಕೆಡಿಸದಿರುವುದು ಸಂವೃತ ತಂತೀಕರಣದ ಒಂದು ವೈಶಿಷ್ಟ್ಯ.

    ವಿದ್ಯುತ್ ತಂತಿಗಳಲ್ಲಿ ವೈವಿಧ್ಯ :  ಹಲವು ರೀತಿಯ ಹಲವು ಪರಿಮಾಣದ, ಹಲವು ಬಗೆಯ ವಿದ್ಯುತ್ ರೋಧಕಕವಚವುಳ್ಳ ತಂತಿಗಳು ಇಂದು ಬಳಕೆಯಲ್ಲಿವೆ.  ಉಷ್ಣತೆ 750 ಅ ಗಿಂತ ಕಡಿಮೆ ಇರುವಲ್ಲಿ ರಬ್ಬರ್ ಅಥವಾ ಶಾಖ ಪ್ಲಾಸ್ಟಿಕ್ ವಿದ್ಯುತ್‍ರೋಧಕಗಳನ್ನು ಸಾಮಾನ್ಯವಾಗಿ ಬಳಸುವರು.  ವಾರ್ನಿಷ್ ಹಾಕಿ ಕೇಂಬ್ರಿಕ್, ಕಲ್ನಾರು, ತೇವನಿರೋಧಕ ರಬ್ಬರ್ ಮೊದಲಾದವನ್ನು ವಿಶಿಷ್ಟ ಸಂದರ್ಭಗಳಲ್ಲಿ ಉಪಯೋಗಿಸುತ್ತಾರೆ.  ತೇವಪೂರಿತ ಸ್ಥಳಗಳಲ್ಲಿ ಮತ್ತು ನೆಲದೊಳಗಡೆ ಬಳಸುವ  ತಂತಿಗಳಿಗೆ ತೇವನಿರೋಧಕ ರಬ್ಬರ್ ಅಥವಾ ಸೀಸದ ವಿದ್ಯುತ್ ರೋಧಕ ಕವಚ ಇರುವುದು.

    ತಂತೀಕರಣ ಮಂಡಲಗಳು :  ಎರಡು ವಿಧದ ತಂತೀಕರಣ ಮಂಡಲಗಳು ಇಂದು ಬಳಕೆಯಲ್ಲಿವೆ : 1 ಟ್ರೀ ವಿಧಾನ,  2 ಲೂಪ್-ಇನ್ ವಿಧಾನ.

ಚಿತ್ರ-3

	1 ಟ್ರೀ ವಿಧಾನ :  ಇದರಲ್ಲಿ ಎರಡು ಮುಖ್ಯ ತಂತಿಗಳನ್ನು ಕಟ್ಟಡದ ಉದ್ದಕ್ಕೂ ಎಳೆಯುವರು.  ಸ್ವಿಚ್ ಮತ್ತು ವಿದ್ಯುದ್ದೀಪಗಳನ್ನು ಮಂಡಲದಲ್ಲಿ ಸೇರಿಸಲು ಮುಖ್ಯ ತಂತಿಗಳೊಡನೆ ಇತರ ತಂತಿಗಳನ್ನು ಸೇರಿಸುತ್ತಾರೆ.  ಹೀಗೆ ಎರಡು ತಂತಿಗಳು ಸೇರಿದಾಗ ಅಲ್ಲಿ ಒಂದು ಸಂಧಿ ಉಂಟಾಗುತ್ತದೆ.  ಇಂಥ ಸಂಧಿಗಳನ್ನು ಸಾಮಾನ್ಯವಾಗಿ ಮುಚ್ಚುತ್ತಾರೆ.  ವಿದ್ಯುನ್ಮಂಡಲದಲ್ಲಿ ಏನಾದರೂ ಅಡಚಣೆ ಉಂಟಾದರೆ ಆಗ ಅದನ್ನು ಸರಿಪಡಿಸಲು ಸಂಧಿಗಳನ್ನು ಶೋಧಿಸಿ ಅಲ್ಲಿ ವಿದ್ಯುನ್ಮಂಡಲಗಳನ್ನು ಮುಕ್ತಗೊಳಿಸಬೇಕಾಗುತ್ತದೆ.  ಇದರಿಂದಾಗಿ ತಂತೀಕರಣ ವ್ಯವಸ್ಥೆಗೆ ಮಾತ್ರವಲ್ಲದೆ ಕಟ್ಟಡದ ಗೋಡೆ ಮತ್ತು ಮಾಡುಗಳಿಗೂ ಧಕ್ಕೆ ತಗಲಬಹುದು.

	2 ಲೂಪ್-ಇನ್ ವಿಧಾನ: ಇದರಲ್ಲಿ ಸಂಧಿಗಳಿರುವುದಿಲ್ಲ.  ಸ್ವಿಚ್ ಅಥವಾ ವಿದ್ಯುದ್ದೀಪಕ್ಕೆ ಜೋಡಣೆ ಬೇಕೆನಿಸಿದರೆ, ಮುಖ್ಯ ತಂತಿಯನ್ನು ಅಲ್ಲಿಯವರೆಗೂ ತಂದು ಮತ್ತೆ ಮುಂದೆ ಅಲ್ಲಿಂದ ಒಯ್ಯಲಾಗುವುದು.  ಸ್ವಿಚ್ ಮತ್ತು ದೀಪ ತಂತಿಗಳೆರಡನ್ನೂ ಹೀಗೆ ಶ್ರೇಣಿಬದ್ಧವಾದ ಲೂಪ್‍ಗಳ (ಕುಣಿಕೆಗಳ) ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಯ್ಯುವುದರಿಂದ ಇದಕ್ಕೆ ಲೂಪ್-ಇನ್ ವಿಧಾನವೆಂದು ಹೆಸರು ಬಂದಿದೆ.  ಇದರಲ್ಲಿ ಸಂಧಿಗಳು ಕಡಿಮೆ; ಅಲ್ಲದೆ ಇರುವ ಸಂಧಿಗಳನ್ನು ಗೋಡೆಯೊಳಗೆ ಮುಚ್ಚಿರುವುದಿಲ್ಲ.  ದೋಷವನ್ನು ಪತ್ತೆ ಹಚ್ಚುವುದಕ್ಕಾಗಿ ಒಂದೊಂದೇ ಕುಣಿಕೆಯನ್ನು ಸುಲಭವಾಗಿ ಪರೀಕ್ಷಿಸುತ್ತ ಹೋಗಬಹುದು.  ಸರಿ ಇದೆಯೆಂದು ಕಂಡುಬರುವ ತಂತೀಕರಣ ವಿಭಾಗವನ್ನು ಸುಲಭವಾಗಿ ಬಳಕೆಗೆ ತರಬಹುದು.

ಚಿತ್ರ-4

	ಯಮಳ ತಂತಿಗಳು ಮತ್ತು ಲೂಪ್-ಇನ್: ಎರಡು ತಂತಿಗಳೂ ಒಂದೇ ಕವಚದೊಳಗಿರುವಂಥ ಹೊರಜಿಯನ್ನು (ಕೇಬಲ್) ತಂತೀಕರಣಕ್ಕೆ ಬಳಸಿದಾಗ ಹೊಸ ರೀತಿಯ ಲೂಪ್-ಇನ್ ವಿಧಾನವನ್ನು ಅನುಸರಿಸಬೇಕಾಗುತ್ತದೆ.  ಯಮಳ ತಂತಿಗಳನ್ನು ಬಳಸಿ ಲೂಪ್-ಇನ್‍ಗಳನ್ನು ದೀಪದಿಂದ ದೀಪಕ್ಕೆ ಉದ್ದಕ್ಕೂ ಸೇರಿಸಲಾಗುತ್ತದೆ.  ಬಳಿಕ ಪ್ರತಿಯೊಂದು ದೀಪದಿಂದಲೂ ಒಂದು ಯಮಳ ತಂತಿಯನ್ನು ಅದರ ಸ್ವಿಚ್ಚಿನತ್ತ ಒಯ್ಯಲಾಗುವುದು. ದೀಪಲೋಲಕವನ್ನು ಜೋಡಿಸಿದಾಗ ಕುಣಿಕೆ ತಂತಿ ಸಂಧಿಸಲ್ಪಡುವುದು.  ದೀಪಲೋಲಕವನ್ನು ಮತ್ತು ಸ್ವಿಚ್ಚಿಗೆ ಜೋಡಣೆಯನ್ನು ಕೊಡಲು ಮೂರು ಕೊನೆಗಳುಳ್ಳ ಒಂದು ಸೀಲಿಂಗ್ ರೋಸನ್ನು ಬಳಸಲಾಗುವುದು.

ಚಿತ್ರ-5

	ಸ್ವಿಚ್: ಸ್ವಿಚ್‍ಗಳನ್ನು ಸರಿಯಾದ ಸ್ಥಾನದಲ್ಲಿ ಇರಿಸುವುದು ಅಗತ್ಯ.  ಕೊಣೆಯನ್ನು ಪ್ರವೇಶಿಸುವಲ್ಲೇ ಕೈಗೆ ನಿಲುಕುವಂತೆ ಸ್ವಿಚ್ ಇರತಕ್ಕದ್ದು; ಕತ್ತಲಿನಲ್ಲೇ ಮುಂದುವರಿದು ಸ್ವಿಚ್ ಹಾಕುವಂತಿರಬಾರದು.  ಕೋಣೆಗೆ ಎರಡು ಬಾಗಿಲುಗಳಿದ್ದರೆ ದೀಪ ದ್ವಿಪಥ ನಿಯಂತ್ರಣಕ್ಕೆ ಒಳಪಟ್ಟಿರಬೇಕು.  ಸಾಗುವೆಡೆ ಮತ್ತು ಅವತರಣಗಳಿಗೂ (ಲ್ಯಾಂಡಿಂಗ್) ದ್ವಿಪಥ ನಿಯಂತ್ರಿತ ದೀಪಗಳಿರಬೇಕು.  ಒಂದು ದೀಪದ ದ್ವಿಪಥ ನಿಯಂತ್ರಣ ಮಂಡಲವನ್ನು ಚಿತ್ರ (6)ರಲ್ಲಿ ತೋರಿಸಿದೆ.  

ಚಿತ್ರ-6

ಇಲ್ಲಿ ಮೂರು ಕೊನೆಗಳಿರುವ ಎರಡು ವಿಶಿಷ್ಟ ತರಗತಿಯ ಸ್ವಿಚ್ಚುಗಳನ್ನು ಉಪಯೋಗಿಸುವರು.  ಈ ಎರಡೂ ಸ್ವಿಚ್ಚುಗಳನ್ನು ಎರಡು ತಂತಿಗಳಿಂದ ಜೋಡಿಸಲಾಗಿರುವುದು. ಒಂದು ಸ್ವಿಚ್ಚಿನ ಸಾಮಾನ್ಯ ಕೊನೆ ನೇರವಾಗಿ ಒಂದು ಪೂರೈಕೆ ತಂತಿಗೂ ಇನ್ನೊಂದು ಸ್ವಿಚ್ಚಿನ ಸಾಮಾನ್ಯ ಕೊನೆ ವಿದ್ಯುದ್ದೀಪದ ಮೂಲಕ ಇನ್ನೊಂದು ಪೂರೈಕೆ ತಂತಿಗೂ ಸೇರಿಸಲ್ಪಟ್ಟಿರುತ್ತವೆ.  ಹೀಗಾಗಿ ದೀಪವನ್ನು ಬೆಳಗಿಸುವುದು ಅಥವಾ ನಂದಿಸುವುದು ಎರಡೂ ಸ್ವಿಚ್ಚುಗಳಿರುವ ಸ್ಥಾನಗಳಿಂದ ಸಾಧ್ಯ.  ಬಹಳ ಉದ್ದವಾದ ಸಾಗುವೆಡೆ ಮತ್ತು ಅವತರಣ ಇರುವಲ್ಲಿ ದೀಪವನ್ನು ತ್ರಿಪಥ ನಿಯಂತ್ರಣಕ್ಕೆ ಒಳಪಡಿಸಬಹುದು. ಇದರಲ್ಲಿ ಮೂರು ಸ್ವಿಚ್ಚುಗಳ ಉಪಯೋಗ ಉಂಟು.  ಇವುಗಳಲ್ಲಿ ಎರಡು ಸ್ವಿಚ್ಚುಗಳು ದ್ವಿಪಥ ನಿಯಂತ್ರಣಕ್ಕೆ ಬಳಸುವ ಸ್ವಿಚ್ಚುಗಳಂತಿರುತ್ತವೆ.  ಮೂರನೆಯ ಸ್ವಿಚ್ಚಿಗೆ ಮಧ್ಯಾಂತರ ಸ್ವಿಚ್ ಎಂದು ಹೆಸರು.  ಇದಕ್ಕೆ ನಾಲ್ಕು ಕೊನೆಗಳು ಇವೆ.  ಈ ಮಂಡಲದ ಬಳಕೆಯಿಂದ ವಿದ್ಯುದ್ದೀಪವನ್ನು ಮೂರೂ ಸ್ವಿಚ್ಚುಗಳಿರುವ ಸ್ಥಾನಗಳಿಂದ ಹೊತ್ತಿಸಬಹುದು ಯಾ ನಂದಿಸಬಹುದು.

ಚಿತ್ರ-7

	ಫ್ಯೂಸ್: ಪ್ರತಿಯೊಂದು ವಿದ್ಯುನ್ಮಂಡಲದ ಮೂಲಕ ಹರಿಯುವ ಪ್ರವಾಹ ನಿರ್ದಿಷ್ಟ ಮಿತಿಯನ್ನು ಮೀರದಂತೆ ಎಚ್ಚರಿಕೆ ವಹಿಸುವುದು ಅತ್ಯವಶ್ಯ.  ವಿದ್ಯುನ್ಮಂಡಲವನ್ನು ಅಧಿಕ ಪ್ರವಾಹದಿಂದ ರಕ್ಷಿಸುವಂಥ ಸರಳ ಮತ್ತು ಮಿತವ್ಯಯಕಾರಿ ವಸ್ತುವೇ ಫ್ಯೂಸ್.  ಇದು ತಂತಿಯ ರೂಪದಲ್ಲಿದೆ.  ಸಾಮಾನ್ಯವಾಗಿ ತಾಮ್ರ, ಸೀಸ, ತವರ ಅಥವಾ ಇವುಗಳ ಮಿಶ್ರಲೋಹದಿಂದ ಇದನ್ನು ತಯಾರಿಸುವರು.  ನಿರ್ದಿಷ್ಟ ಪರಿಮಾಣಕ್ಕಿಂತ ಹೆಚ್ಚು ಪ್ರವಾಹ ಫ್ಯೂಸಿನ ಮೂಲಕ ಹರಿದಾಗ ಅದು ಕರಗಿ ಆ ಮಂಡಲವನ್ನು ಮುಕ್ತಗೊಳಿಸುತ್ತದೆ.  ಆಗ ಅಧಿಕ ಪ್ರವಾಹ ಮಂಡಲದ ತಂತಿಗಳ ಮೂಲಕ ಹರಿಯುವುದು ನಿಲ್ಲುತ್ತದೆ.  ಸಾಮಾನ್ಯವಾಗಿ ಮನೆಗಳ ಪ್ರಕಾಶನ ಮಂಡಲಗಳಲ್ಲಿ ಫ್ಯೂಸ್ 3 ಆ್ಯಂಪಿಯರ್ ಪ್ರವಾಹವನ್ನು ಒಯ್ಯಲು ಸಮರ್ಥವಾಗಿದ್ದು ಪ್ರವಾಹ 5 ಆ್ಯಂಪಿಯರನ್ನು ತಲುಪಿದಾಗ ಫ್ಯೂಸ್ ಕರಗುತ್ತದೆ.  ಮನೆಗಳ ತಂತೀಕರಣ 5 ಆ್ಯಂಪಿಯರ್ ಪ್ರವಾಹವನ್ನು ಒಯ್ಯಲು ಸಮರ್ಥವಾಗಿರುವುದು.

ಚಿತ್ರ-8

	ಭೂಸಂಪರ್ಕ: ವಿದ್ಯುತ್ ಆಘಾತದಿಂದ ರಕ್ಷಣೆಯನ್ನು ಪಡೆಯಲು ಭೂಸಂಪರ್ಕ ಅತ್ಯಾವಶ್ಯಕ.  ವಿದ್ಯುತ್ ಒಲೆ, ವಿದ್ಯುತ್ ಇಸ್ತ್ರಿಪೆಟ್ಟಿಗೆ ಮೊದಲಾದ ವಿದ್ಯುತ್ ಉಪಕರಣಗಳಲ್ಲಿ ಅನೇಕ ಲೋಹ ಭಾಗಗಳುಂಟು.  ವಿದ್ಯುತ್ ಉಪಕರಣಗಳಲ್ಲಿ ವಿದ್ಯುತ್ ಹರಿಯುವ ಭಾಗಗಳೇನೋ ವಿದ್ಯುತ್ ರೋಧಗಳಿಂದ ಅವೃತವಾಗಿರುವುವು ನಿಜ. ಆದರೆ ಈ ವಿದ್ಯುತ್ ರೋಧ ದುರ್ಬಲವಾಗುವ ಅಥವಾ ಸಂಪೂರ್ಣಾವಾಗಿ ನಾಶವಾಗುವ ಸಾಧ್ಯತೆ ಉಂಟು.  ಆಗ ವಿದ್ಯುತ್ತು ಹರಿಯುವ ತಂತಿ ಮತ್ತು ಉಪಕರಣದ ಲೋಹ ಭಾಗಗಳ ನಡುವೆ ನೇರವಾಗಿ ವಿದ್ಯುತ್ ಸಂಪರ್ಕ ಏರ್ಪಡಬಹುದು.  ಇಂಥ ಸಂದರ್ಭದಲ್ಲಿ ನೆಲದ ಮೇಲೆ ಬರಿಕಾಲಿನಲ್ಲಿ ಅಥವಾ ಒದ್ದೆಯಾದ ಪಾದರಕ್ಷೆಯನ್ನು ಹಾಕಿ ನಿಂತಿರುವ ಅಥವಾ ನೀರಿನ ಕೊಳವೆಯನ್ನು ಮುಟ್ಟಿರುವ ಕಬ್ಬಿಣದ ಕಂಬಿಯನ್ನು ಹಿಡಿದಿರುವ ಅಥವಾ ಭೂಸಂಪರ್ಕ ಹೊಂದಿರುವ ಯಾವುದೇ ಲೋಹವನ್ನು ಹಿಡಿದಿರುವ ವ್ಯಕ್ತಿ ವಿದ್ಯುತ್ ಉಪಕರಣದ ಆವಿಷ್ಟ ಲೋಹಭಾಗವನ್ನು ಹಿಡಿದಾಗ ವಿದ್ಯುದಾಘಾತವನ್ನು ಅನುಭವಿಸುವನು.  ಇದನ್ನು ತಪ್ಪಿಸಲು ವಿದ್ಯುತ್ ಉಪಕರಣಗಳ ಹೊರ ಭಾಗದಲ್ಲಿರುವ ಲೋಹಭಾಗವನ್ನು ಭೂತಂತಿಯ ಮೂಲಕ ಭದ್ರವಾಗಿ ನೆಲಕ್ಕೆ ಸೇರಿಸಬೇಕು.  ಆಗ ಆ ಲೋಹಭಾಗ ಭೂಮಿಯ ವಿದ್ಯುತ್ ವಿಭವಕ್ಕಿಂತ ಹೆಚ್ಚು ವಿಭವವನ್ನು ಪಡೆಯುವ ಸಾಧ್ಯತೆ ಇರುವುದಿಲ್ಲ; ಎಂದರೆ ಅದು ಶೂನ್ಯ ವಿಭವದಲ್ಲಿರುತ್ತದೆ.  ಸಾಮನ್ಯವಾಗಿ ನೀರಿನ ಮುಖ್ಯ ಕೊಳಾಯಿಯನ್ನು ಭೂಸಂಪರ್ಕಕ್ಕಾಗಿ ಬಳಸುತ್ತಾರೆ.  ನೆಲದೊಳಗೆ ನೇರವಾಗಿ ಹೋಗುವ ನೀರಿನ ಕೊಳಾಯಿಗೆ ಭೂಸಂಪರ್ಕ ತಂತಿಯನ್ನು ಸೇರಿಸಬೇಕು.

	ವಿದ್ಯುತ್ ಸೋರಿಕೆ (ಲೀಕೇಜ್): ಯಾವುದೇ ವಿದ್ಯುತ್‍ರೋಧ ವಸ್ತು ಪರಿಪೂರ್ಣವಲ್ಲ.  ಎಲ್ಲ ವಿದ್ಯುತ್‍ರೋಧ ವಸ್ತುಗಳ ಮೂಲಕವೂ ಅತ್ಯಲ್ಪ ಪರಿಮಾಣದ ವಿದ್ಯುತ್ ಸೋರಿಹೋಗದೆ ಇರುವುದಿಲ್ಲ.  ಹೀಗಾಗಿ ವಿದ್ಯುತ್ ಸೋರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಅಸಾಧ್ಯ.  ಅದು ಒಂದು ಮಿತಿಯೊಳಗಿದ್ದರೆ ಸೋರಿಕೆಯಿಂದೇನೂ ಬಾಧಕವಿಲ್ಲ.  ಸೋರಿಕೆ ಸಂಭವಿಸುವುದು ಮುಖ್ಯವಾಗಿ ಎರಡು ವಿಧಗಳಲ್ಲಿ;

	1 ವಿದ್ಯುತ್‍ರೋಧದ ಮೈ ಮೂಲಕ ನಡೆಯುವ ಸೋರಿಕೆ.

	2 ವಿದ್ಯುತ್ ವಾಹಕಗಳ ಅನಾವೃತ ತುದಿಗಳಿಂದ, ಹತ್ತಿಯ ವಿದ್ಯುತ್‍ರೋಧಲಾಡಿ ಮತ್ತು ಸೀಲಿಂಗ್‍ರೋಸ್ ಮತ್ತು ಸ್ವಿಚ್ಚುಗಳ ಪಿಂಗಾಣಿಯ ಮೂಲಕ ನಡೆಯುವ ಸೋರಿಕೆ.

	ಸಾಮಾನ್ಯವಾಗಿ ಎರಡನೆಯ ವಿಧದಿಂದ ನಡೆಯುವ ಸೋರಿಕೆಯ ಪರಿಮಾಣ ಮೊದಲನೆಯ ವಿಧದ್ದಕ್ಕಿಂತ ಹೆಚ್ಚು.  ಯಾವುದೊಂದು ತಂತೀಕರಣ ವ್ಯವಸ್ಥೆಗೆ ವಿದ್ಯುತ್ ಪೂರೈಕೆ ಮಾಡುವ ಮೊದಲು ಅದನ್ನು ವಿದ್ಯುತ್‍ರೋಧ ಪರೀಕ್ಷೆಗೆ ಗುರಿ ಮಾಡಿ ಒಂದು ನಿರ್ಧರಿತ ಪರಿಮಾಣದ ವಿದ್ಯುತ್‍ರೋಧವನ್ನು ಅದು ಪಡೆದಿದೆ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು.  ಅಲ್ಲದೆ ವಿದ್ಯುತ್‍ರೋಧ ಪರೀಕ್ಷೆಯನ್ನು ಆಗಾಗ ಮಾಡುತ್ತಿರುವುದು ಸೂಕ್ತ.
(ಕೆ.ಸಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ